ನಮ್ಮ ಉತ್ತರ ಕರ್ನಾಟಕದ ಕಡೆಯ ಹಿರಿಯರು ಒಂದು ಮಾತು ಹೇಳುತ್ತಿರುತ್ತಾರೆ, ಮೇಲಿಂದ ಮೇಲೆ.
ಅದೇನೆಂದರೇ, 'ಮನುಷ್ಯನಾಗಿ ಹುಟ್ಟಿದ ಮೇಲೆ, ದರಿದ್ರತನ ಬಿಟ್ಟು ಮೈಮುರಿದು ಜವಾಬ್ದಾರಿಯಿಂದ ಏನಾದರೂ ಕಾಯಕ ಮಾಡಬೇಕು. ಇಲ್ಲವಾದಲ್ಲಿ ದಾರಿದ್ರ್ಯ ಮೈಗೂಡಿ ಮನುಷ್ಯ ಎಲ್ಲವನ್ನು ಕಳೆದುಕೊಂಡು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ತಟ್ಟೆ ಬಾರಿಸುತ್ತ ಭಿಕ್ಷೆ ಬೇಡುತ್ತಾ ತಿರುಗಬೇಕಾಗುತ್ತದೆ,' ಎಂದು.
ಭಿಕ್ಷಾಪಾತ್ರೆ ಹಿಡಿಯುವುದು ಅಥವಾ ಭಿಕ್ಷೆ ಬೇಡುವುದು ಎಂದರೆ, ಅದು ಒಬ್ಬ ಮನುಷ್ಯನ ದಾರಿದ್ರದ, ಅಧ:ಪತನದ, ಅಧೋಗತಿಯ, ಅವನತಿಯ ಸೂಚನೆ. ಮುಂದಾಲೋಚನೆ ಇಲ್ಲದೆ ಬದುಕಿದ್ದುದರ ಸ್ಪಷ್ಟ ನಿದರ್ಶನ. ಅವರ ಪ್ರಸ್ತಾಪ ಇಲ್ಲಿ ಮಾಡುವುದರಿಂದ, ಅದು ವೈಯಕ್ತಿಕವಾಗಿ ಯಾರಿಗೂ ಮಾಡುವ ಅವಮಾನವಲ್ಲ. ಅದರಿಂದ ಕಲಿಯುವುದು ಸಾಕಷ್ಟಿದೆ. ತಿದ್ದುಕೊಳ್ಳುವುದು ಇನ್ನೂ ಬಹಳಷ್ಟಿದೆ.
ವಿಶೇಷವೆಂದರೆ, ಸಾಕಷ್ಟು ಜನ ಬಿಕ್ಷುಕರು ತಮ್ಮ ಅಶಕ್ತತೆ, ಬುದ್ಧಿಮಾಂದ್ಯತೆ, ಅನಕ್ಷರತೆ, ಅಂಗವಿಕಲತೆಯನ್ನೇ ಬಂಡವಾಳವಾಗಿಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಹಾಗೂ, ಇನ್ನಿತರ ಜನ ಬಿಕ್ಷುಕರು ಅಶಕ್ತರಲ್ಲ, ಬುದ್ಧಿಮಾಂದ್ಯರಲ್ಲ, ಅನಕ್ಷರಸ್ಥರಲ್ಲ, ಅಂಗವಿಕಲರಲ್ಲ, ಅಪ್ರಬುದ್ಧರಲ್ಲ. ಆದರೂ,
ದಾರಿದ್ರ್ಯ ಮೈಗೂಡಿ ಎಲ್ಲವನ್ನು ಕಳೆದುಕೊಂಡು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ತಟ್ಟೆ ಬಾರಿಸುತ್ತ ಭಿಕ್ಷೆ ಬೇಡುತ್ತಾ ತಿರುಗಾಡುತ್ತಿರುತ್ತಾರೆ.
ಇನ್ನೊಂದು ವಿಶೇಷವೆಂದರೆ, ದೇಶದ ಸಾಮಾನ್ಯರಲ್ಲಿಯೂ ಕೂಡ ಸಾಕಷ್ಟು ಜನ ಅಶಕ್ತರಿಲ್ಲದವರು, ಬುದ್ಧಿಮಾಂದ್ಯರಲ್ಲದವರು, ಅನಕ್ಷರಸ್ಥರಲ್ಲದವರು, ಅಂಗವಿಕಲರಲ್ಲದವರು, ಅಪ್ರಬುದ್ಧರಲ್ಲದವರು ಸಾಕಷ್ಟು ಕಷ್ಟ ಪಟ್ಟು ತಮ್ಮದಾದೊಂದು ದಾರಿ ಹುಡುಕಿ ಯಾರ ಸಹಾಯವೂ ಇಲ್ಲದೆ, ಆತ್ಮಗೌರವ ಮತ್ತು ಮರ್ಯಾದೆಯಿಂದ ಬೆಳೆದು, ಮುಂದೆ ಬಂದಿರುವ ಸಾಕಷ್ಟು ನಿದರ್ಶನಗಳು ನಮ್ಮ ಎದುರಿಗಿವೆ.
ಅದೇ ರೀತಿ, ಇನ್ನಿತರ ಜನ ತಮ್ಮ ಅಶಕ್ತತೆ, ಬುದ್ಧಿಮಾಂದ್ಯತೆ, ಅನಕ್ಷರತೆ, ಅಂಗವಿಕಲತೆಯ
ಹೊರತಾಗಿಯೂ ಕೂಡ ಸಾಕಷ್ಟು ಕಷ್ಟ ಪಟ್ಟು ತಮ್ಮದಾದ ದಾರಿ ಹುಡುಕಿ ಯಾರ ಸಹಾಯವೂ ಇಲ್ಲದೆ, ಆತ್ಮಗೌರವ ಮತ್ತು ಮರ್ಯಾದೆಯಿಂದ ಬೆಳೆದು, ಮುಂದೆ ಬಂದಿರುವ ನಿದರ್ಶನಗಳು ಕೂಡ ನಮ್ಮ ಎದುರಿಗೆ ಸಾಕಷ್ಟಿವೆ.
ಅಶಕ್ತತೆ, ಬುದ್ಧಿಮಾಂದ್ಯತೆ, ಅನಕ್ಷರತೆ, ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಸರ್ಕಾರದಿಂದ ಅನುಕೂಲತೆಗಳಿವೆ, ಅದರ ಲಾಭ ಪಡೆದು ಮುಂದೆ ಬರಲು ಕೂಡ ಸಾಕಷ್ಟು ದಾರಿಗಳಿವೆ. ಅದಕ್ಕೆ ಬೇಕಾಗಿರುವುದು ಇಷ್ಟೇ, ಒಂದು ಸದೃಢ ಮನಸ್ಥಿತಿ, ಆತ್ಮಗೌರವ ಮತ್ತು ಮರ್ಯಾದೆಯಿಂದ ಬೆಳೆದು ಮುಂದೆ ಬರುವ ದೃಢಸಂಕಲ್ಪ, ಸೂಕ್ತ ಮಾರ್ಗದರ್ಶನ ಮತ್ತು ನೆರವು, ಮತ್ತು ಸರಿಯಾದ ನಿಟ್ಟಿನಲ್ಲಿ ಗುರಿ ತಲುಪುವವರೆಗೆ ಅನಿರತ ಪ್ರಯತ್ನ. ಇವೆಲ್ಲದಕ್ಕೂ ಈಗಾಗಲೇ ಸರ್ಕಾರದಿಂದ ಹಾಗೂ ಕೆಲವು ಖಾಸಗಿ ಸಂಸ್ಥೆಗಳಿಂದ ಸಾಕಷ್ಟು ಅವಕಾಶಗಳಿವೆ, ಪ್ರೋತ್ಸಾಹವಿದೆ ಮತ್ತು ಅನುಕೂಲತೆಗಳು ಇವೆ.
ಹಾಗಾಗಿ, ಭಿಕ್ಷುಕರನ್ನು ಕಡೆಗಣಿಸದೆ, ಅವರನ್ನು ಸರಿಯಾದ ನಿಟ್ಟಿನಲ್ಲಿ ತರಲು ಪ್ರಯತ್ನಿಸಿ, ಸೂಕ್ತ ದಾರಿ ತೋರಿಸಿ ಸ್ವಾವಲಂಬಿಗಳಾಗಿ ಗೌರವದಿಂದ ಬದುಕಲು ಅನುವು ಮಾಡುವುದು ಸೂಕ್ತ. ಅಲ್ಲದೇ, ಭಿಕ್ಷೆ ನೀಡಿ, ಇನ್ನೂ ಭಿಕ್ಷೆ ಬೇಡಲು ಉತ್ತೇಜಿಸುವುದನ್ನು ಕ್ರಮೇಣ ಕಡಿಮೆ ಮಾಡುವುದು ಸೂಕ್ತ ಎಂಬುದು, ನನ್ನ ವೈಯಕ್ತಿಕ ಅನಿಸಿಕೆ.
ಹಾಗಾಗಿ, ಹಿರಿಯರು ಹೇಳುವುದು, ’ಭಿಕ್ಷುಕರು ತಟ್ಟೆ ಬಾರಿಸುತ್ತಾರೆ, ತಟ್ಟೆ ಬಾರಿಸುವುದು ದಾರಿದ್ರ್ಯದ, ಅಧೋಗತಿಯ, ಅಧಃಪತನದ, ಅವನತಿಯ ಸೂಚನೆ ಎಂದು'.
ಅಷ್ಟರಲ್ಲಿ, ಈ ದೇಶದ ಒಬ್ಬ ಮಹಾರಾಜ ಖಡಕ್ಕಾಗಿ ನಿರ್ದೇಶನ ನೀಡಿ ತನ್ನ ಪ್ರಜೆಗಳಿಂದ ತಟ್ಟೆ ಬಾರಿಸಿಯೇ ಬಿಟ್ಟ.
- ಸಂಕೇತ ಏಣಗಿ